ಬ್ಲೇರೊ, ಲ್ವೀ
	1872-1936. ವಾಯುವಿಗಿಂತ ಅಧಿಕ ತೂಕದ ಯಂತ್ರದಿಂದ ಇಂಗ್ಲೀಷ್ ಕಾಲುವೆಯನ್ನು ಮೊತ್ತಮೊದಲು ದಾಟಿದ ಸಾಹಸಿ, ಉಪಜ್ಞೆಕಾರ. ಫ್ರಾನ್ಸಿನ ಕೇಂಬ್ರೀಯಲ್ಲಿ ಜನಿಸಿದ ಬ್ಲೇರೊ ಪ್ಯಾರಿಸಿನ ಸೆಂಟ್ರಲ್ ಸ್ಕೂಲ್ ಆಫ್ ಆಟ್ರ್ಸ್ ಅಂಡ್ ಮ್ಯಾನುಫೇಕ್ಚರ್ಸ್‍ನಲ್ಲಿ ಶಿಕ್ಷಣ ಮುಗಿಸಿದ. ತರುವಾಯ ವಾಯುಮಂಡಲದಲ್ಲಿ ಹಾರಾಟ ನಡೆಸಲು ಉಪಯುಕ್ತವಾದ ಯಂತ್ರಗಳ ಬಗ್ಗೆ ಪ್ರಯೋಗ ನಡೆಸಿ ಮೋಟಾರಿನ ಶಕ್ತಿಯಿಂದ ರೆಕ್ಕೆ ಬಡಿಯುವ ಕೃತಕ ಪಕ್ಷಿ ತಯಾರಿಸಿದ (1908). ಆದರೆ ಅದು ಹಾರಲಿಲ್ಲ. ಗ್ಲೈಡರ್ ಬೈಪ್ಲೇನ್ (ಎರಡು ತಲಗಳಲ್ಲಿ ಮೈಯಿರುವ ಯಂತ್ರ) ಮತ್ತು ಮಾನೊಪ್ಲೇನುಗಳ ಏಕತಲದಲ್ಲಿ ಮೈಯಿರುವ ಯಂತ್ರಗಳ ಮೇಲೆ 1906ರ ಅನಂತರ ಬ್ಲೇರೋ ಅನೇಕ ಪ್ರಯೋಗ ನಡೆಸಿದ. ಅವನು ತಯಾರಿಸಿದ ಬ್ಲೇರೋ ಎಂಬ ಮಾನೊಪ್ಲೇನ್ ಮೂರು ಉರುಳೆಗಳ ಎಂಜಿನ್ನಿನಿಂದ ನಡೆಯುತ್ತಿತು. 1908ರಲ್ಲಿ ತಾನೇ ನಿರ್ಮಿಸಿದ ಮಾನೊಪ್ಲೇನಿನಲ್ಲಿ 20 ಮಿನಿಟುಗಳ ಹಾರಾಟ ನಡೆಸಿದ. 1909 ಜುಲೈ 25ರಂದು ಮಾನೊಪ್ಲೇನನ್ನು ಸ್ವತಃ ಏರಿ ಉತ್ತರ ಫ್ರಾನ್ಸಿನ ಕೌಲೇಯಿಂದ ಹೊರಟು ಇಂಗ್ಲಿಷ್ ಕಾಲುವೆ ದಾಟಿ ಡೋವರಿನಲ್ಲಿ ಇಳಿದ. 37 ಮಿನಿಟುಗಳಲ್ಲಿ ಇಂಗ್ಲಿಷ್ ಕಾಲುವೆ ದಾಟಿದ ಅವನ ಸಾಹಸ ಯೂರೊಪಿನಲ್ಲಿ ಕುತೂಹಲದ ಅಲೆಗಳನ್ನೆಬ್ಬಿಸಿತು. ಈ ದಾಖಲೆ ಹಾರಾಟಕ್ಕೆ ಡೇಲಿ ಮೈಲ್ ಪತ್ರಿಕೆ ಸಾವಿರ ಪೌಂಡುಗಳ ಬಹುಮಾನ ನೀಡಿತು.

	ಒಂದನೆಯ ಮಹಾಯುದ್ಧದ ಹಾಗೂ ಅನಂತರದ ದಿನಗಳಲ್ಲಿ ಬ್ಲೇರೊ ವಿಮಾನೋತ್ಪಾದನೆಯಲ್ಲಿ ನಿರತನಾದ. 1912ರ ತನಕs ಸ್ವಿವೆಲ್ ವ್ಹೀಲ್ ಕ್ರಾಸ್ ವಿಂಡ್ ಲ್ಯಾಂಡಿಂಗ್ ಗಿಯರ್ ಎಂಬುದು ಬ್ಲೇರೊ ವಿಮಾನಗಳಲ್ಲಿ ಪ್ರಮಾಣೀಕೃತ ಸಲಕರಣೆಯಾಗಿತ್ತು. ಅವನ ಕಾರ್ಖಾನೆಗಳಲ್ಲಿ ಫ್ರೆಂಚ್ ಸೈನ್ಯಕ್ಕಾಗಿ 10,000 ವಿಮÁನಗಳು ತಯಾರಾದವು. 1935ರಲ್ಲಿ ಉತ್ಪಾದನೆ ನಿಲ್ಲಿಸುವ ವೇಳೆಗೆ ಅವನು ಅನೇಕ ನಾಗರಿಕ, ಸಮರ ಮತ್ತು ನೌಕಾ ವಿಮಾನಗಳನ್ನು ತಯಾರಿಸಿದ್ದ. ವಾಯುಯಾನಿಗಳಿಗಾಗಿ ಇಂಟರ್‍ನ್ಯಾಷನಲ್ ಏರೊನಾಟಿಕ್ ಫೆಡರೇಷನ್ ನೀಡುವ ಯೋಗ್ಯತಾಪತ್ರವನ್ನು ಮೊತ್ತಮೊದಲ ಬಾರಿಗೆ ಬ್ಲೇರೊನಿಗೆ ನೀಡಲಾಯಿತು.   
    (ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ